ವಾದಿರಾಜ್, ಯು ಎಸ್
(1927-2003). ವಾದಿರಾಜ್ ಸದಭಿರುಚಿಯ ಕನ್ನಡ ಚಿತ್ರಗಳನ್ನು ತಯಾರಿಸುವ ಹೆಬ್ಬಯಕೆ ಹೊತ್ತು ತಮ್ಮ ಸೋದರ ಜವಾಹರ್‍ರೊಂದಿಗೆ `ಭಾರತಿ ಚಿತ್ರ ಸಂಸ್ಥೆಯನ್ನು ಸ್ಥಾಪಿಸಿ, ನವಜೀವನ, ನಂದಾದೀಪ, ನಾಂದಿಯಂತಹ ಶ್ರೇಷ್ಠ ಚಿತ್ರಗಳನ್ನು ತಯಾರಿಸಿದ ನಟ-ನಿರ್ಮಾಪಕ ಹಾಗೂ ನಿರ್ದೇಶಕ ಯು.ಎಸ್.ವಾದಿರಾಜ್ ಅವರು ಉಡುಪಿಯ ಸಮೀಪದ ಫಣಿಯಾಡಿಯಲ್ಲಿ 1927ರ ಜನವರಿ 3ರಂದು ಜನಿಸಿದರು. ತಾಯಿ ಭಾರತಿ ಬಾಯಿ ತಂದೆ ಎಸ್.ಯು. ಘಣಿಯಾಡಿ ಪತ್ರಕರ್ತರು ಅಂತರಂಗ ವಾರಪತ್ರಿಕೆ, ಸಂಪಾದಕರು, ಪ್ರಕಾಶಕರು.  ತುಳು ಭಾಷಾ ಸಂಶೋಧಕರು. ಸ್ವಾತಂತ್ರ್ಯ ಹೋರಾಟಗಾರರು. ಸೋದರಿ ಹರಿಣಿಯವರು `ಜಗನ್ಮೋಹಿನಿ ಚಿತ್ರದಿಂದ ರಸಿಕರ ಮನ ಗೆದ್ದ ಸುಸಂಸ್ಕøತ ತಾರೆ. ಈಗ ಗೃಹಿಣಿ. ಹಿಂದಿ ರಾಷ್ಟ್ರಭಾಷಾ ಪದವಿ ಪಡೆದು ಮದರಾಸಿನ  ಹಿಂದಿ ಪ್ರಚಾರ ಸಭಾದಲ್ಲಿ ಉದ್ಯೋಗಿಯಾಗಿದ್ದ ವಾದಿರಾಜ್ ತಮಿಳು ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಕುಳ್ಳನೆಯ ವ್ಯಕ್ತಿ ವಾದಿರಾಜ್ ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದವರು. ರಂಗಭೂಮಿ ಮತ್ತು ಚಿತ್ರರಂಗ ಎರಡರಲ್ಲೂ ಪರಿಶ್ರಮ ಪಡೆದಿದ್ದು ವಾದಿರಾಜ್ ``ನಂದಾದೀಪ ಚಿತ್ರದ ಕಥೆಯನ್ನು ಬರೆದು, ಎಂ.ಆರ್.ವಿಠಲ್‍ರನ್ನು ಅದನ್ನು ನಿರ್ದೇಶಿಸಿದರು. ಈ ಚಿತ್ರ ರಾಷ್ಟ್ರಪ್ರಶಸ್ತಿ (1962) ಪಡೆಯಿತು. ಅಲ್ಲದೆ ಗುಜರಾತಿ ಭಾಷೆಯಲ್ಲಿ ಪುನರ್‍ನಿರ್ಮಾಣ ಕಂಡಿತು.

ನಾಂದಿ, ನವಜೀವನ, ಪ್ರೇಮಕ್ಕೂ ಪರ್ಮಿಟ್ಟೆ, ನಮ್ಮ ಮಕ್ಕಳು, ನಾ ಮೆಚ್ಚಿದ ಹುಡುಗ, ಸೀತಾ, ಕಾಕನಕೋಟೆ, ನಮ್ಮಮ್ಮನ ಸೊಸೆ, ಅದೇ ಕಣ್ಣು-ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಲ್ಲದೆ ``ಸೀತಾ ಚಿತ್ರವನ್ನೂ ತಾವೇ ನಿರ್ದೇಶಿಸಿದರು. ಇವರು ನಿರ್ದೇಶಿಸಿದ ``ದಂಗೆಯೆದ್ದ ಮಕ್ಕಳು ರಾಷ್ಟ್ರಪ್ರಶಸ್ತಿ ಗಳಿಸಿತು. ಮಕ್ಕಳ ಚಿತ್ರವಾಗಿ ``ಇನ್ನೊಂದು ಮುಖ''ವನ್ನು  ನಿರ್ದೇಶಿಸಿದ ವಾದಿರಾಜ್ 2003ರಲ್ಲಿ ನಿಧನರಾದರು. ಸೋದರ ಜವಾಹರ್ ಬೇರೆ ಉದ್ಯಮದಲ್ಲಿ ತೊಡಗಿದರು. ಸೋದರಿ ತಾರೆ ಹರಿಣಿ ವೈವಾಹಿಕ ಸುಖೀ ಜೀವನದಲ್ಲಿ ಮಗ್ನೆ. ಸರ್ಕಾರದ ಸಮಿತಿಗಳಲ್ಲಿ ವಾದಿರಾಜ್ ಕೆಲಸಮಾಡಿದ್ದಾರೆ. ಇವರು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ ಚಿತ್ರಗಳ ಸಂಖ್ಯೆ 50ಕ್ಕೂ ಹೆಚ್ಚು.

ಕನ್ನಡ ಚಿತ್ರರಂಗಕ್ಕೆ ನೀಡಿರುವ ಗಣನೀಯ ಕೊಡುಗೆಗಾಗಿ ಯು.ಎಸ್.ವಾದಿರಾಜ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ 1998-99ನೇ ಸಾಲಿನ ಡಾ||ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದೆ.				         
  (ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ